ಪೊರೆ ಪರಿಣಾಮ
	ವಾಹಕದ ಮೇಲ್ಮೈ ಬಳಿಯಲ್ಲೇ ಹರಿದು ಅದರ ಒಟ್ಟು ಖಂಡಕ್ಷೇತ್ರದ ಅಲ್ಪಭಾಗಕ್ಕೆ ಮಾತ್ರ ಸೀಮಿತವಾಗಿರುವ ಮತ್ತು ವಾಹಕದ ರೋಧವನ್ನು ಹೆಚ್ಚಿಸುವ ಪರಿಣಾಮವನ್ನು ಉಂಟುಮಾಡುವ ವಿದ್ಯತ್ಪ್ರವಾಹದ ಪ್ರವೃತ್ತಿ (ಸ್ಕಿನ್ ಎಫೆಕ್ಟ್).  ವಾಹಕ ಪೊರೆ ಪರಿಣಾಮ (ಕ್ಯಾರಿಯರ್ ಸ್ಕಿನ್ ಎಫೆಕ್ಟ್) ಎಂದೂ ಕೆಲ್ವಿನ್ ಪೊರೆ ಪರಿಣಾಮ ಎಂದೂ ಕರೆಯುವುದುಂಟು.  ಒಂದೇ ಸಮವಾದ ಖಂಡ ವಿಸ್ತಾರವಿರುವ ವಾಹಕದಲ್ಲಿ ಸ್ಥಿರ ಏಕಮುಖ ವಿದ್ಯತ್ಪ್ರವಾಹ ಹರಿಯುತ್ತಿದ್ದರೆ ಖಂಡಭಾಗದ ಪ್ರತಿಯೊಂದು ಬಿಂದುವಿನಲ್ಲೂ ಪ್ರವಾಹಸಾಂದ್ರತೆ ಒಂದೇ ಇರುತ್ತದೆ.  ಆದರೆ ವಾಹಕದಲ್ಲಿ ಪರ್ಯಾಯ ಪ್ರವಾಹ ಹರಿದಾಗ ಮಾತ್ರ ಹೀಗಿರುವುದಿಲ್ಲ.  ಖಂಡಭಾಗದ ಹೊರಪದರಗಳಲ್ಲಿ ಪ್ರವಾಹಸಾಂದ್ರತೆ ಅಧಿಕವಾಗಿದ್ದು ವಾಹಕದ ಒಳಪದರಗಳಲ್ಲಿ ಅತ್ಯಲ್ಪವಾಗಿರುತ್ತದೆ.  ಇದು ಖಂಡಭಾಗದಲ್ಲಿ ವ್ಯತ್ಯಾಸವಾಗುವ ರೀತಿ ಪ್ರವಾಹದ ಆವರ್ತಾಂಕವನ್ನು ಅವಲಂಬಿಸಿದೆ.  ಅತ್ಯಧಿಕ ಆವರ್ತಾಂಕದ ಪ್ರವಾಹವಾದಾಗ ಇದು ವಾಹಕದ ಹೊರ ಪದರದಲ್ಲಿ ಮಾತ್ರ ಇರುತ್ತದೆ.  ಇದೇ ಪೊರೆ ಪರಿಣಾಮ.  ಹೀಗಾಗುವುದರಿಂದ ವಾಹಕದ ಪರಿಣಾಮಕಾರಿ ರೋಧ ಸ್ಥಿರ ಪ್ರವಾಹಕ್ಕಿರುವುದಕ್ಕಿಂತ ಪರ್ಯಾಯ ಪ್ರವಾಹಕ್ಕೆ ಹೆಚ್ಚಾಗಿರುತ್ತದೆ.  ಇದಕ್ಕೆ ಕಾರಣವನ್ನು ಹೀಗೆ ಹೇಳಬಹುದು.  ಪ್ರವಾಹ ಹರಿದಾಗ ವಾಹಕದ ಹೊರಗೂ ಒಳಗೂ ಕಾಂತಕ್ಷೇತ್ರ ಏರ್ಪಡುತ್ತದೆ.  ಪ್ರವಾಹ ವ್ಯತ್ಯಾಸವಾದಾಗ ಹೊರ ಪದರಗಳಲ್ಲಾಗುವುದಕ್ಕಿಂತ ವಾಹಕದ ಒಳಪದರಗಳಲ್ಲಿ ಹೆಚ್ಚಿನ ಕಾಂತಕ್ಷೇತ್ರದ ವ್ಯತ್ಯಾಸವಾಗುತ್ತದೆ.  ವಾಹಕದ ಮಧ್ಯಭಾಗಕ್ಕೆ ಹೋದಂತೆಲ್ಲ ಕಾಂತಕ್ಷೇತ್ರ ಹೆಚ್ಚುವುದೇ ಇದಕ್ಕೆ ಕಾರಣ.  ಆದ್ದರಿಂದ ಪ್ರೇರಿಸಿದ ವಿದ್ಯುಚ್ಚಾಲಕ ಶಕ್ತಿಯನ್ನು ವಿರೋಧಿಸುವ ಪ್ರೇರಿತ ವಿದ್ಯುಚ್ಚಾಲಕಶಕ್ತಿ ವಾಹಕದ ಮಧ್ಯಭಾಗದಲ್ಲಿ ಹೆಚ್ಚಾಗಿದ್ದು ಹೊಸ ಭಾಗದಲ್ಲಿ ಕಡಿಮೆ ಇರುತ್ತದೆ.  ಇದರಿಂದ ವಾಹಕದ ರೋಧ ಮಧ್ಯಭಾಗದಲ್ಲಿ ಅಧಿಕವಾಗಿದ್ದು ಹೊರ ಭಾಗದಲ್ಲಿ ಅತ್ಯಲ್ಪ ಇರುತ್ತದೆ.  ಅಂದರೆ ಪ್ರವಾಹ ಹೊರಪದರದಲ್ಲಿ ಹೆಚ್ಚಾಗಿರುತ್ತದೆ.  ಈ ಪರಿಣಾಮದ ದೆಸೆಯಿಂದ ಅಧಿಕ ಆವರ್ತಾಂಕದ ಪರ್ಯಾಯ ಪ್ರವಾಹಕ್ಕೆ ದಪ್ಪ ತಂತಿಯನ್ನು ವಾಹಕವಾಗಿ ಉಪಯೋಗಿಸುವುದಿಲ್ಲ.  ಅವಾಹಕದ ಹೊದಿಕೆಯುಳ್ಳ ಅನೇಕ ತೆಳು ತಾಮ್ರದ ತಂತಿಗಳನ್ನು ಒಟ್ಟಿಗೆ ಹೊಸೆದು ಅದನ್ನು ವಾಹಕವಾಗಿ ಉಪಯೋಗಿಸುವರು.  ಈ ವಿಧಾನದಿಂದ ಪ್ರವಾಹಕ್ಕೆ ಹೆಚ್ಚಿನ ವಿಸ್ತಾರ ದೊರಕಿ ವಾಹಕದ ರೋಧ ಕಡಿಮೆ ಆಗುತ್ತದೆ.
(ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ